ಪೇಸ್‌ಗೆ ನಲವತ್ತು, ಇದು ಕೃತಜ್ಞತೆ ಅರ್ಪಿಸುವ ಹೊತ್ತು!

ಬೆತ್ತಲೆ ಪ್ರಪಂಚ
ಲಿಯಾಂಡರ್ ಪೇಸ್
ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದರಿಂದ ಅವರ ಮೊಬೈಲ್‌ಗೆ ಮೆಸೇಜ್ ಬಂತು- "ಬಾಂಬೆ ಹಾಸ್ಪಿಟಲ್‌ನ ಡಾ. ಭೀಮ್‌ಸಿಂಘಾಲ್‌ರನ್ನು ಕೂಡಲೇ ಸಂಪರ್ಕಿಸಿ". ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸ್ತ್ರಚಿಕಿತ್ಸೆಗಾಗಿ ನ್ಯೂಯಾರ್ಕ್‌ಗೆ ಹೋದರೂ ಫಲಕಾರಿಯಾಗದೆ ವಾಪಸ್ ಬಂದಿದ್ದರು. ಹೀಗೆ ಯಾವುದೇ ದಾರಿ ಕಾಣದೆ ಕೈಚೆಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಡಾ. ಭೀಮ್ ಸಿಂಘಾಲ್ ಮುಂಬೈನಲ್ಲೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ, ಗುಣಪಡಿಸಿದ್ದರು. ಹೌದು, ಡಾ. ವೆಸ್ ಪೇಸ್ ಮಗನ ಮೆದುಳಿನಲ್ಲಿ ಕೂಡ ಗಡ್ಡೆ ಬೆಳೆದಿತ್ತು. ಆತ 'ಸಿನ್‌ಸಿನಾಟಿ ಮಾಸ್ಟರ್ಸ್‌' ಟೆನಿಸ್ ಟೂರ್ನಿಯಲ್ಲಿ ಆಟವಾಡುತ್ತಿದ್ದಾಗ ಮೈದಾನದಲ್ಲೇ ಕುಸಿದಿದ್ದ, ತೀವ್ರತಲೆನೋವು, ತಲೆಸುತ್ತು, ಸುಸ್ತು ಕಾಣಿಸಿಕೊಂಡಿದ್ದರಿಂದ ಅಮೆರಿಕದ ಆರ್ಲ್ಯಾಂಡೋದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದು ಕ್ಯಾನ್ಸರ್ ಗಡ್ಡೆಯಿರಬಹುದು ಎಂದು ಸಂಶಯಪಡಲಾಗಿತ್ತು. ಬದುಕುಳಿಯುವ ಸಾಧ್ಯತೆ ಬಗ್ಗೆ ಅನುಮಾನಗಳು ಆರಂಭವಾಗಿದ್ದವು. ಅಂದಹಾಗೆ ಡಾ. ವೆಸ್ ಪೇಸ್ ಅವರ ಮಗ ಯಾರೆಂದು ಗೊತ್ತಾಯಿತಲ್ಲವೆ?
ಈ ದೇಶದ ಹೆಮ್ಮೆಯ ಪುತ್ರ ಲಿಯಾಂಡರ್ ಏಡ್ರಿಯನ್ ಪೇಸ್!
ಇನ್ನು ಡಾ. ವೆಸ್ ಪೇಸ್ ಯಾರೆಂದುಕೊಂಡಿರಿ? 1972ರ ಮ್ಯೂನಿಚ್ ಒಲಿಂಪಿಕ್ಸ್ ಹಾಕಿಯಲ್ಲಿ ಕಂಚಿನ ಪದಕ ಪಡೆದ ಭಾರತ ತಂಡದ ಮಿಡ್‌ಫೀಲ್ಡರ್. ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪರಿಣತ ವೈದ್ಯ ಕೂಡ ಹೌದು. ಡಾ. ವೆಸ್‌ಪೇಸ್ ಕೂಡಲೇ ಡಾ. ಭೀಮ್ ಸಿಂಘಾಲ್ ಅವರನ್ನು ಸಂಪರ್ಕಿಸಿದರು. ಅವರು ಮುಂಬೈನಿಂದಲೇ ಆರ್ಲ್ಯಾಂಡೋ ವೈದ್ಯರ ಜತೆ ಸಂಪರ್ಕ ಸಾಧಿಸಿದರು. ಅದು ಕ್ಯಾನ್ಸರ್‌ಕಾರಕ ಗಡ್ಡೆಯಲ್ಲ, parasitic infectionನಿಂದಾದ ಗಡ್ಡೆಯೆಂದು ಕ್ಷಣಮಾತ್ರದಲ್ಲಿ ಹೇಳಿಬಿಟ್ಟರು. ಹಾಗಂತ ಸುಮ್ಮನಿರಲಾದೀತೇ? ಸುಮಾರು ಒಂದು ಡಜನ್‌ಗೂ ಅಧಿಕ ಪರೀಕ್ಷೆಗಳ ನಂತರ ಡಾ. ಸಿಂಘಾಲ್ ಅನುಮಾನವೇ ನಿಜವಾಯಿತು. ಟೇಪ್‌ವರ್ಮ್‌ನಿಂದಾದ (ಲಾಡಿಹುಳು ಸೋಂಕು) ಇನ್ಫೆಕ್ಷನ್ ಎಂದು ಗೊತ್ತಾಯಿತು. ಆದರೆ ಅದಕ್ಕೂ ಮೊದಲು ಪೇಸ್ 7 ದಿನ ಆಸ್ಪತ್ರೆಯಲ್ಲಿ ಅತಂತ್ರವಾಗಿ ಬದುಕು ಕಳೆದಿದ್ದರು. ಆಸ್ಪತ್ರೆಯ ಹಾಸಿಗೆ ನಿಜವಾದ ಅರ್ಥದಲ್ಲಿ ಮರಣಶಯ್ಯೆಯೆನಿಸಿತ್ತು. ಬದುಕುಳಿವ ಸಾಧ್ಯತೆಯೇ ಇಲ್ಲವೆನಿಸಿಬಿಟ್ಟಿತ್ತು. ಪರೀಕ್ಷೆಯ ಫಲಿತಾಂಶ ಹೊರಬಿದ್ದ ನಂತರ ಎಂ.ಡಿ. ಆಂಡರ್‌ಸನ್ ಕ್ಯಾನ್ಸರ್ ಸೆಂಟರ್ ಆಸ್ಪತ್ರೆಯಲ್ಲೇ ನಡೆದ ಪತ್ರಿಕಾಗೋಷ್ಠಿ ವೇಳೆ ಕಣ್ಣಲ್ಲಿ ನೀರು ತುಂಬಿಕೊಂಡು, "ಅದಷ್ಟವಶಾತ್, ನನಗೆ ಮರುಜನ್ಮ ಸಿಕ್ಕಿದೆ. ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುತ್ತೇನೆ" ಎಂದಿದ್ದರು ಪೇಸ್. ಅಂದು ಅವರ ಧ್ವನಿ ನಡುಗುತ್ತಿತ್ತು, ಸಿರಿಂಜ್‌ಗಳು ಸತತವಾಗಿ ನಾಟಿದ್ದರಿಂದ ದೇಹ ಬಳಲಿತ್ತು. ಸ್ಟೆರಾಯ್ಡ್‌ಗಳಿಂದಾಗಿ ತೂಕ 18 ಕೆ.ಜಿ.ಹೆಚ್ಚಾಗಿತ್ತು! ಭಾರತಕ್ಕೆ ವಾಪಸ್ಸಾದ ಪೇಸ್ ಒಂದು ದಿನ ಕನ್ನಡಿ ಎದುರು ನಿಂತು ತಮ್ಮನ್ನೇ ತಾವು ನೋಡಿಕೊಂಡರು. "ನನ್ನ ಧಡೂತಿ ದೇಹ ನನಗೇ ರೇಜಿಗೆ ಹುಟ್ಟಿಸಿತು. ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಇಂತಹ ದೇಹ ಇಟ್ಟುಕೊಂಡು ಹೇಗೆತಾನೇ ಟೆನಿಸ್ ಆಡಲಿ" ಎಂದು ತುಂಬಾ ನೊಂದುಕೊಂಡಿದ್ದರು.
ಕನ್ನಡಿಯಿಂದ ದೂರಸರಿಯುತ್ತಲೇ ಅವರೊಳಗಿನ ಹೋರಾಟಗಾರ ಮತ್ತೆ ಜಾಗೃತನಾದ.
ತನ್ನ ಟೆನಿಸ್‌ಗಾಥೆ ಮುಗಿದೇಹೋಯಿತು ಎಂದು ಬರೆದ ಮಾಧ್ಯಮಗಳನ್ನು ಸುಳ್ಳಾಗಿಸುವ ಸಂಕಲ್ಪ ಮಾಡಿದರು. ಈ ಎಲ್ಲ ಏರುಪೇರುಗಳು ಸಂಭವಿಸಿದ್ದು 2003, ಜುಲೈನಲ್ಲಿ. ಡಿಸೆಂಬರ್‌ನಲ್ಲಿ ಮತ್ತೆ ವ್ಯಾಯಾಮ, ಟೆನಿಸ್ ಅಭ್ಯಾಸ ಆರಂಭಿಸಿದರು. ಆತನದ್ದು ಎಂತಹ ದೃಢ ವ್ಯಕ್ತಿತ್ವ ಎಂಬುದಕ್ಕೆ ಮಾಜಿ ಡೇವಿಸ್ ಕಪ್ ನಾಯಕ ಹಾಗೂ ಪೇಸ್ ಅವರ ಏಳಿಗೆಯ ಶಿಲ್ಪಿ ನರೇಶ್ ಕುಮಾರ್, ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ- "1990ರ ಆಸ್ಟ್ರೇಲಿಯನ್ ಓಪನ್ ಜೂನಿಯರ್ ಟೆನಿಸ್‌ನ ಫೈನಲ್‌ನಲ್ಲಿ ಸೋತು ಭಾರತಕ್ಕೆ ಹಿಂದಿರುಗಿದ ಲಿಯಾಂಡರ್ ಪೇಸ್, ನನ್ನ ಕಚೇರಿಯಲ್ಲಿ ಕುಳಿತುಕೊಂಡು, ಚಿಂತೆ ಬೇಡ, ಈ ವರ್ಷದ ವಿಂಬಲ್ಡನ್ ಅನ್ನು ನಾನೇ ಗೆಲ್ಲುತ್ತೇನೆ ಎಂದಿದ್ದರು! Bloody fool, ತಾನು ಏನು ಮಾತನಾಡುತ್ತಿದ್ದೇನೆ ಎಂಬುದು ಆತನಿಗೇ ತಿಳಿದಿಲ್ಲ ಎಂದು ನಾನು ಮನದಲ್ಲೇ ಅಂದುಕೊಂಡಿದ್ದೆ. ಕೊನೆಗೆ ನನ್ನ ಎಣಿಕೆಯೇ ತಪ್ಪಾಗಿತ್ತು. 17 ವರ್ಷದ ಪೇಸ್ 1990ರ ಜೂನಿಯರ್ ವಿಂಬಲ್ಡನ್ ಚಾಂಪಿಯನ್ ಆಗಿದ್ದರು".
ಆಸ್ಪತ್ರೆಯ ಹಾಸಿಗೆಯಿಂದೆದ್ದು ಬಂದ ಪೇಸ್ ಮತ್ತೆ ಟೆನಿಸ್ ಅಭ್ಯಾಸ ಆರಂಭಿಸಿದರು. ಆದರೆ ಮುಂದಿನ ಡೇವಿಸ್ ಕಪ್ ಸೆಣಸಾಟಕ್ಕೆ ಕೇವಲ ಎರಡು ತಿಂಗಳು ಬಾಕಿಯಿದ್ದವು. ಅದಾಗಲೇ ಭಾರತ ವಿಶ್ವಗುಂಪಿನಿಂದ ಹೊರಹೋಗಿತ್ತು. ನ್ಯೂಜಿಲ್ಯಾಂಡ್ ಅನ್ನು ಸೋಲಿಸಿದರೆ ಮಾತ್ರ ವಿಶ್ವಗುಂಪಿಗೆ ತೇರ್ಗಡೆಯಾಗಲಿತ್ತು. ಅಂದು ಎಲ್ಲ ಅನುಮಾನ, ಶಂಕೆಗಳ ನಡುವೆಯೂ ಲಿಯಾಂಡರ್ ಪೇಸ್ ಡೇವಿಸ್ ಕಪ್‌ನಲ್ಲಿ ಆಡುವ ನಿರ್ಧಾರ ಕೈಗೊಂಡರು!
ಆತ ನಮಗೆ ಇಷ್ಟವಾಗುವುದೇ ಆ ಕಾರಣಕ್ಕೆ.
ಗ್ರ್ಯಾನ್‌ಸ್ಲಾಮ್‌ಗಳೆಂದರೆ ಒಬ್ಬ ಆಟಗಾರ ತನಗಾಗಿ, ವೈಯಕ್ತಿಕ ಸಾಧನೆಗಾಗಿ ಆಡುವ ಟೂರ್ನಿ. ಅಲ್ಲಿರುವ ಹಣದ ಪ್ರಮಾಣ ಕೂಡ ಪ್ರಮುಖ ಪ್ರೇರಣೆಯಾಗಿರುತ್ತದೆ. ಪೀಟ್ ಸ್ಯಾಂಪ್ರಾಸ್ ಎಷ್ಟೇ ಒಳ್ಳೆಯ ಟೆನಿಸ್ ಆಟಗಾರನಾಗಿದ್ದರೂ ದೇಶಕ್ಕಾಗಿ ಆಡುವ ಡೇವಿಸ್ ಕಪ್ ಎಂದರೆ ದೂರ ಉಳಿಯುತ್ತಿದ್ದರು. ಆದರೆ 2010ರಲ್ಲಿ ವೃತ್ತಿಪರ ಟೆನಿಸ್‌ನಲ್ಲಿ ಇಪ್ಪತ್ತೊಂದನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲೂ ಏಕೆ ಡೇವಿಸ್ ಕಪ್ ಎಂದರೆ ಪ್ರಾಣವನ್ನೇ ಪಣಕ್ಕಿಟ್ಟಂತೆ ಆಡುತ್ತೀಯಾ ಎಂದು ಕೇಳಿದಾಗ, For me, nothing can beat the experience of representing the country. I'd still choose an Olympic or Commonwealth Games medal over winning a few more Grand Slams. My responsibility to my captain and to a billion people is more than what it is to just me, when I play professionally on the Tour, ಎಂದಿದ್ದರು ಪೇಸ್. ಆತ ತನ್ನ ಸಾಮರ್ಥ್ಯ ಮೀರಿ ಪ್ರದರ್ಶನ ನೀಡಿರುವುದೆಲ್ಲ ಒಲಿಂಪಿಕ್ಸ್ ಹಾಗೂ ಡೆವಿಸ್ ಕಪ್‌ನಲ್ಲೇ. ಡೇವಿಸ್ ಕಪ್‌ನಲ್ಲಿ ಗೊರಾನ್ ಇವಾನಿಸೆವಿಚ್ ಹಾಗೂ ದಕ್ಷಿಣ ಆಫ್ರಿಕಾದ ವೆಯ್ನ್ ಫೆರಿರಾ ಅವರನ್ನೂ ಮಣಿಸಿದ್ದಾರೆ. 2004, ಫೆಬ್ರವರಿಯಲ್ಲೂ ಅಂತಹದ್ದೇ ಅತಿಮಾನುಷ ಪ್ರದರ್ಶನ ತೋರಿದ್ದರು. ನ್ಯೂಜಿಲ್ಯಾಂಡ್‌ನ ಇನ್ವರ್‌ಕಾರ್ಗಿಲ್‌ನಲ್ಲಿ ಕೊರೆಯುವ ಚಳಿ. ಭಾರತೀಯ ಆಟಗಾರರು ಮೈದಾನಕ್ಕಿಳಿಯುವುದೇ ಸಾಹಸವೆನಿಸತೊಡಗಿತ್ತು. ಅಲ್ಲಿದ್ದ ಪರಿಸ್ಥಿತಿ, ಇನ್ನೂ ಚೇತರಿಸಿಕೊಳ್ಳುತ್ತಿದ್ದ ಲಿಯಾಂಡರ್ ದೇಹಸ್ಥಿತಿಯನ್ನು ನೋಡಿದ್ದ ಎಂಥವರಿಗೂ ಆಶ್ಚರ್ಯವಾಗುವಂತೆ ಡೇವಿಸ್ ಕಪ್‌ನಲ್ಲಿ 1-1 ಸಮಬಲ ಸಾಧಿಸಿದರು. ನಂತರ ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಜತೆಗೂಡಿ 2-1 ಮುನ್ನಡೆ ಸಾಧಿಸಿದರಾದರೂ ರಿವರ್ಸ್ ಸಿಂಗಲ್ಸ್‌ನಲ್ಲಿ ಭಾರತದ ವಿಶಾಲ್ ಪುನ್ನಾ ಅವರು ನೀಲ್ಸನ್‌ಗೆ ಮಣಿಯುವುದರೊಂದಿಗೆ ನ್ಯೂಜಿಲ್ಯಾಂಡ್ 2-2 ಸಮಗೌರವ ಪಡೆಯಿತು. ಎರಡನೇ ರಿವರ್ಸ್ ಸಿಂಗಲ್ಸ್‌ನಲ್ಲಿ ಗೆದ್ದರಷ್ಟೇ ಭಾರತ ವಿಶ್ವಗುಂಪಿಗೆ ತೇರ್ಗಡೆಯಾಗುವುದು ಎಂಬಂತಾಯಿತು. ಅಂತಹ ಸಂದಿಗ್ಧ ಸನ್ನಿವೇಶದಲ್ಲಿ ಪೇಸ್ ಮತ್ತೆ ಮೈದಾನಕ್ಕಿಳಿದರು! ಸಿಮೋನ್ ರಿಯಾ ವಿರುದ್ಧದ ಆ ಪಂದ್ಯದಲ್ಲಿ 3-6ಅಂತರದಿಂದ ಪೇಸ್ ಮೊದಲ ಸೆಟ್ ಕಳೆದುಕೊಂಡರು. ಭಾರತದ ಆತಂಕ ಹೆಚ್ಚಾಗತೊಡಗಿತು. ಆದರೇನಂತೆ ಮುಂದಿನ ಮೂರು ಸೆಟ್‌ಗಳನ್ನು 7-5, 6-3. 6-3ರಿಂದ ಗೆದ್ದ ಪೇಸ್ ಭಾರತ ಮತ್ತೆ ವರ್ಲ್ಡ್‌ಗ್ರೂಪ್‌ಗೆ ತೇರ್ಗಡೆಯಾಗುವಂತೆ ಮಾಡಿದರು. ನೀವೊಬ್ಬ ಟೆನಿಸ್ ಪ್ರೇಮಿಯಾಗಿದ್ದರೆ ಖಂಡಿತ ಆ ಪಂದ್ಯವನ್ನು ಮರೆತಿರುವುದಿಲ್ಲ. ಮತ್ತೊಬ್ಬ ಖ್ಯಾತ ಭಾರತೀಯ ಟೆನಿಸ್ ತಾರೆ ಮಹೇಶ್ ಭೂಪತಿ ಕೂಡ 12 ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. ಆದರೆ ನಮ್ಮ ಮನಸ್ಸಿಗೆ ಹತ್ತಿರವಾಗುವುದು, ನಾವು ಭಾವುಕರಾಗುವುದು ಲಿಯಾಂಡರ್ ಪೇಸ್ ವಿಷಯದಲ್ಲಿ ಮಾತ್ರ.
ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್‌ನಲ್ಲಿ ಭಾರತೀಯ ಆಟಗಾರರು ಮಹತ್ತರ ಸಾಧನೆ ಮಾಡದೇ ಇರಬಹುದು. ಆದರೆ ಡೇವಿಸ್ ಕಪ್‌ನಲ್ಲಿ ಭಾರತ ಇದುವರೆಗೂ ಮೂರು ಬಾರಿ ಸೆಮಿಫೈನಲ್ ಹಂತಕ್ಕೆ ತಲುಪಿದೆ. ಅದರಲ್ಲೂ 1993ರಲ್ಲಿ ಫ್ರಾನ್ಸ್ ವಿರುದ್ಧ ಫ್ರೆಜುಸ್‌ನಲ್ಲಿ ನಡೆದ ಕ್ವಾರ್ಟ್‌ರ್ ಫೈನಲ್ಲನ್ನು ಖಂಡಿತ ಮರೆಯಲು ಸಾಧ್ಯವಿಲ್ಲ. ಅನುಭವಿ ರಮೇಶ್ ಕೃಷ್ಣನ್‌ಗೆ ಅಂದು ಸಾಥ್ ನೀಡಿದ್ದು 20 ವರ್ಷದ ಲಿಯಾಂಡರ್ ಪೇಸ್. ಆ ಕಾಲದಲ್ಲಿ ಕೆಂಪುಮಣ್ಣಿನ ಮೇಲೆ ಫ್ರಾನ್ಸನ್ನು ಮಣಿಸುವುದನ್ನು ಸ್ವಪ್ನದಲ್ಲೂ ಊಹಿಸುವುದಕ್ಕೆ ಸಾಧ್ಯವಿರಲಿಲ್ಲ. ನೀವೇ ಯೋಚನೆ ಮಾಡಿ, ಆರ್ನಾಡ್ ಬಾಷ್ ಹಾಗೂ ಆ ವರ್ಷದ ಫ್ರೆಂಚ್ ಓಪನ್ ಫೈನಲ್ ತಲುಪಿದ್ದ ಖ್ಯಾತ ಟೆನಿಸ್ ತಾರೆ ಹೆನ್ರಿ ಲೆಕೊಂಟೆಯನ್ನು ಸೋಲಿಸುವ ಕನಸು ಕಾಣುವುದಕ್ಕಾದರೂ ಸಾಧ್ಯವಿತ್ತೆ?! ರಮೇಶ್ ಕೃಷ್ಣನ್ ಮೊದಲ ಸಿಂಗಲ್ಸ್‌ನಲ್ಲಿ ಆರ್ನಾಡ್ ಬಾಷ್‌ಗೆ ಸುಲಭವಾಗಿ ಮಣಿದುಬಿಟ್ಟರು. ಆದರೇನಂತೆ ಪೇಸ್  6-1, 6-2, 3-6, 6-3 ಅಂತರದಿಂದ ಲೆಕೊಂಟೆ ಅವರನ್ನೇ ಸೋಲಿಸಿ ಬಿಟ್ಟರು! ಡಬಲ್ಸ್‌ನಲ್ಲಿ ಫ್ರಾನ್ಸ್ ಜೋಡಿ ಗೆದ್ದು 2-1 ಮುನ್ನಡೆ ಸಾಧಿಸಿತು. ರಿವರ್ಸ್ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಪೇಸ್ ಎದುರು ಸೋಲುವ ಸರದಿ ಆನಾರ್ಡ್ ಬಾಷ್‌ದ್ದಾಯಿತು!! ಕೊನೆಯ ಪಂದ್ಯ ಕ್ವಾರ್ಟರ್ ಫೈನಲ್‌ನ ನಿರ್ಣಾಯಕ ಹಂತವಾಯಿತು. ನಮ್ಮ ರಮೇಶ್ ಕೃಷ್ಣನ್ 5 ಸೆಟ್‌ಗಳ ಹೋರಾಟದಲ್ಲಿ ರುಡಾಲ್ಫ್ ಗಿರ್ಲ್ಬರ್ಟ್ ಅವರನ್ನು ಸೋಲಿಸುವುದರೊಂದಿಗೆ ಭಾರತ ಮೂರನೇ ಬಾರಿಗೆ ಡೇವಿಸ್ ಕಪ್ ಸೆಮಿಫೈನಲ್ ತಲುಪಿತು. 1990ರಲ್ಲಿ ಆಡಿದ ಮೊದಲ ಪಂದ್ಯದಿಂದ ಇದುವರೆಗೂ ಡೇವಿಸ್ ಕಪ್‌ನಲ್ಲಿ ಪೇಸ್, ಶಕ್ತಿ ಮೀರಿಯೇ ಪ್ರದರ್ಶನ ನೀಡಿದ್ದಾರೆ. 2006ರಲ್ಲಿ ನಡೆದ ಏಷ್ಯಾ/ಓಶಿನಿಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಸ್ನಾಯುಸೆಳೆತದ ನಡುವೆಯೂ ಹೋರಾಡಿ ಅಕೀಲ್ ಖಾನ್‌ರನ್ನು ಸೋಲಿಸಿ, "I am proud to be an India today" ಎಂದು ಬಿಕ್ಕಳಿಸುತ್ತಾ ಹೇಳಿದ್ದನ್ನು ಯಾರು ತಾನೇ ಮರೆಯಲು ಸಾಧ್ಯ?
2010ರಲ್ಲಿ ನಡೆದ ಬ್ರೆಝಿಲ್ ವಿರುದ್ಧದ ಡೇವಿಸ್ ಕಪ್ ಪಂದ್ಯವನ್ನು ನೆನಪಿಸಿಕೊಳ್ಳಿ.
ಆಗ ಕೂಡ ಭಾರತ 2004ರ ಪರಿಸ್ಥಿತಿಯನ್ನೇ ಎದುರಿಸುತ್ತಿತ್ತು. ವರ್ಲ್ಡ್ ಗ್ರೂಪ್‌ಗೆ ತೇರ್ಗಡೆಯಾಗಬೇಕಾದರೆ ಬ್ರೆಝಿಲ್ಲನ್ನು ಸೋಲಿಸಲೇಬೇಕಿತ್ತು. ಮೊದಲ ಸಿಂಗಲ್ಸ್‌ನಲ್ಲಿ 2-0 ಹಿನ್ನಡೆ, ಡಬಲ್ಸ್‌ನಲ್ಲಿ ಗೆದ್ದರೂ ರಿವರ್ಸ್‌ಸಿಂಗಲ್ಸ್‌ನ ಎರಡೂ ಪಂದ್ಯಗಳನ್ನು ಗೆಲ್ಲಬೇಕಿತ್ತು. ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯವನ್ನು ಸೋಮ್‌ದೇವ್ ದೇವ್‌ವರ್ಮನ್ ಗೆದ್ದರಾದರೂ (ಎದುರಾಳಿ ಗಾಯಗೊಂಡು ಹಿಂದೆ ಸರಿದರು) ರೋಹನ್ ಬೋಪಣ್ಣ ಗೆಲ್ಲುವುದರ ಬಗ್ಗೆ ತೀವ್ರ ಅನುಮಾನಗಳಿದ್ದವು. ಆದರೆ ಎಲ್ಲರೂ ಆಶ್ಚರ್ಯಪಡುವಂತೆ 476ನೇ ಶ್ರೇಯಾಂಕಿತ ಬೋಪಣ್ಣ, 75ನೇ ಶ್ರೇಯಾಂಕದ ರಿಕಾರ್ಡೋ ಮೆಲ್ಲೋ ಅವರನ್ನು ಸೋಲಿಸಿದಾಗ ಮೈದಾನಕ್ಕೆ ಓಡಿಬಂದ ಪೇಸ್ ಆತನನ್ನು ಹೆಗಲ ಮೇಲೆ ಹೊತ್ತು ಕೋರ್ಟ್ ತುಂಬಾ ಮೆರವಣಿಗೆ ಮಾಡಿದರು. ಒಬ್ಬ ಲಿಯಾಂಡರ್ ಪೇಸ್, ಒಬ್ಬ ಧನರಾಜ್ ಪಿಳ್ಳೈ, ಮೇರಿ ಕೋಮ್ ನಮ್ಮ ಹೃದಯದ ಗೂಡೊಳಗೆ ಸ್ಥಾನ ಗಿಟ್ಟಿಸಿದ್ದೇ ದೇಶಕ್ಕಾಗಿ ಆಡುವಾಗ ಅವರು ತೋರುವ ಸಾಧನೆ, ಸಮಗ್ರತೆ, ದೇಶಪ್ರೇಮದಿಂದಾಗಿ. ನನ್ನ ಹಾಗೂ ಭೂಪತಿ  ನಡುವೆ ಉತ್ತಮ ಪಾರ್ಟ್‌ನರ್‌ಶಿಪ್ ಇತ್ತು. ನಾವಿಬ್ಬರೂ ಭಾರತೀಯ ಆಟಗಾರರಾಗಿದ್ದೆವು. ಭಾರತೀಯ ಜೋಡಿ ವಿಶ್ವ ಚಾಂಪಿಯನ್ ಆಗಬೇಕೆಂಬುದು ನನ್ನ ಬಯಕೆಯಾಗಿತ್ತು. ವಿಶ್ವದಲ್ಲೇ ನಂ.1 ಆಟಗಾರರಾಗಬೇಕೆಂಬ ಹಂಬಲ ನನ್ನದಾಗಿತ್ತು. ಈ ಕನಸನ್ನು ಕಟ್ಟಿಕೊಂಡೇ ನಾನು ಸಿಂಗಲ್ಸ್ ಆಡುವುದನ್ನು ಬಿಟ್ಟೆ ಎಂದು ಪೇಸ್ ಹೇಳುತ್ತಾರೆ. ಆದರೆ ಡೆವಿಸ್ ಕಪ್‌ನಲ್ಲಿ ಸಿಂಗಲ್ಸ್ ಆಡುವುದನ್ನು ಪೇಸ್ ಯಾವತ್ತೂ ಮರೆಯಲಿಲ್ಲ.
1998ರಲ್ಲಿ ಪೈಲಟ್ ಪೆನ್ ಇಂಟರ್‌ನ್ಯಾಷನಲ್ ಟೆನಿಸ್ ಚಾಂಪಿಯನ್ ಶಿಪ್‌ನಲ್ಲಿ ಪೀಟರ್ ಕೋರ್ಡಾ, ಪೀಟ್ ಸ್ಯಾಂಂಪ್ರಾಸ್, ಪ್ಯಾಟ್ರಿಕ್ ರ್ಯಾಫ್ಟರ್ ಅವರಂತಹ ವಿಶ್ವದ ನಂಬರ್ 1,2,3 ಶ್ರೇಯಾಂಕಿತ ಆಟಗಾರರು ಪಾಲ್ಗೊಂಡಿದ್ದರು. ಇವರ್ಯಾರೂ ನಾಲ್ಕನೇ ಸುತ್ತು ದಾಟಲಿಲ್ಲ. ಎಲ್ಲರೂ ಸೋತು ನಿರ್ಗಮಿಸಿದರು. 2ನೇ ಶ್ರೇಯಾಂಕಿತ ಸ್ಯಾಂಪ್ರಾಸ್ ಅವರನ್ನು ಸೋಲಿಸಿದ್ದು ನಮ್ಮ ಪೇಸ್ ಎಂದರೆ ನಂಬುತ್ತೀರಾ?! ಸ್ಯಾಂಪ್ರಾಸ್ ಅವರನ್ನು ಪೇಸ್ ಮೊಟ್ಟಮೊದಲ ಬಾರಿಗೆ ಎದುರಿಸಿದ್ದೇ ಆ ಟೂರ್ನಿಯಲ್ಲಿ. ಮೊದಲ ಸೆಣಸಾಟದಲ್ಲೇ ಕೇವಲ 74 ನಿಮಿಷಗಳಲ್ಲಿ 6-3, 6-4ರಿಂದ ಸ್ಯಾಂಪ್ರಾಸ್‌ರನ್ನು ಸೋಲಿಸಿದ್ದರು!! ಕಳೆದ 14 ವರ್ಷಗಳ ಅವಧಿಯಲ್ಲಿ ಲಿಯಾಂಡರ್ ಪೇಸ್ 12 ಗ್ರ್ಯಾನ್ ಸ್ಲಾಮ್‌ಗಳನ್ನು ಗೆದ್ದಿದ್ದಾರೆ. ಪುರುಷರ ಡಬಲ್ಸ್ ಹಾಗೂ ಮಿಕ್ಸ್‌ಡ್ ಡಬಲ್ಸ್‌ನಲ್ಲಿ ವಿಜಯಿಯಾಗಿದ್ದಾರೆ. ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಮೂರು ಬಾರಿ, ಮಾರ್ಟಿನ್ ಡಾಮ್ ಅವರೊಂದಿಗೆ ಒಮ್ಮೆ ಹಾಗೂ ಲೂಕಾಸ್ ಡ್ಲೂಹಿ ಅವರೊಂದಿಗೆ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಹಾಗೇ ಮಿಕ್ಸಡ್ ಡಬಲ್ಸ್‌ನಲ್ಲಿ ಲೀಸಾ ರೇಮಂಡ್ ಅವರೊಂದಿಗೆ ಒಂದು ಬಾರಿ, ಮಾರ್ಟಿನಾ ನವ್ರಾಟಿಲೊವಾ ಜತೆ ಎರಡು ಬಾರಿ, ಕಾರಾ ಬ್ಲ್ಯಾಕ್ ಅವರ ಜತೆಗೂಡಿ ಮೂರು ಬಾರಿ ಗೆದ್ದಿದ್ದಾರೆ.
ಅವರು ಟೆನಿಸ್‌ಗೆ ಪದಾರ್ಪಣೆ ಮಾಡಿದ್ದು 1990ರಲ್ಲಿ, ಡೇವಿಸ್ ಕಪ್‌ನಲ್ಲಿ. ಆ ವರ್ಷ ಚಂಡೀಗಡದಲ್ಲಿ ನಡೆದ ಡೆವಿಸ್ ಕಪ್‌ನಲ್ಲಿ ಭಾರತ 1-4 ಅಂತರದಿಂದ ಹೀನಾಯ ಸೋಲು ಅನುಭವಿಸಿತು. ಗೆದ್ದಿದ್ದು ಒಂದೇ ಪಂದ್ಯ. ಲಿಯಾಂಡರ್ ಪೇಸ್-ಜೀಶನ್ ಅಲಿ ಡಬಲ್ಸ್‌ನಲ್ಲಿ ಜಪಾನ್ ಜೋಡಿಯನ್ನು ಸೋಲಿಸಿದ್ದರು. ಅಂದು ಪ್ರಾರಂಭವಾದ ಯಶೋಗಾಥೆಗೆ 2013ಕ್ಕೆ 23 ವರ್ಷಗಳು ತುಂಬಿವೆ.  ಜತಗೆ 1973, ಜೂನ್ 17 ರಂದು ಜನಿಸಿದ ಲಿಯಾಂಡರ್ ಪೇಸ್, ಬರುವ ವಾರ ಬದುಕಿನಲ್ಲಿ 40 ವಸಂತಗಳನ್ನು ಪೂರೈಸಲಿದ್ದಾರೆ. 180 ದೇಶಗಳು ಆಡುವ ಕ್ರೀಡೆ ಟೆನಿಸ್. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ರಾಷ್ಟ್ರಗೀತೆ ಮೊಳಗುವಂತೆ ಮಾಡಿದ, ರಾಷ್ಟ್ರಪ್ರೇಮವನ್ನು ಮೈಮನಗಳಲ್ಲಿ ತುಂಬಿಕೊಂಡಿರುವ ಪೇಸ್ ಅವರನ್ನು ಮರೆಯಲು ಸಾಧ್ಯವೆ?

- ಪ್ರತಾಪ್ ಸಿಂಹ

Comments

Popular posts from this blog

ಟೈಗರ್ ಹಿಲ್ಸ್ ಗೆದ್ದ ಟೈಗರ್‌ಗಳಿಗೆ ನಮನ

ಭಗವದ್ಗೀತೆ